ಹಿಂದಿನ ಸೀಸನ್‌ಗಳಿಗೆ ಹೋಲಿಸಿದರೆ ಬಿಗ್‌ಬಾಸ್ ಕನ್ನಡ ಸೀಸನ್ 13 ಅಷ್ಟೇನು ಮಜಾ ಕೊಡ್ತಿಲ್ಲ. ಟಿಆರ್‌ಪಿ ಕೂಡ ಕಮ್ಮಿ ಇದೆ. ಸ್ಪರ್ಧಿಗಳ ಆಯ್ಕೆ ವಿಚಾರದಲ್ಲೇ ಆಯೋಜಕರು ಎಡವಿದ್ದಾರೆ ಎನ್ನುವ ಕಾಮೆಂಟ್ ಕೂಡ ಕೇಳಿಬಂದಿತ್ತು. ಕೊನೆ ಪಕ್ಷ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಗಳು ಏನಾದರೂ ಮ್ಯಾಜಿಕ್ ಮಾಡ್ತಾರೆ ಎಂದುಕೊಂಡ್ರೆ ಅದು ಸುಳ್ಳಾಗಿದೆ.

ಇರೋದ್ರಲ್ಲಿ ಸೌಂದರ್ಯ ಶೆಟ್ಟಿ, ಗಾನವಿ ಗೌಡ, ಆಸಿಯಾ ಹಾಗೂ ಯಶಸ್ ಕೊಂಚ ಮಟ್ಟಿಗೆ ಗಮನ ಸೆಳೆಯುತ್ತಿದ್ದಾರೆ. ಈ ಬಾರಿ ಒಟ್ಟು 21 ಮಂದಿ ದೊಡ್ಮನೆ ಒಳಗೆ ಹೋಗಿದ್ದಾರೆ. ಈಗಾಗಲೇ 49 ದಿನ ಮುಗಿದಿದೆ. ಸದ್ಯಕ್ಕೆ 13 ಮಂದಿ ಮಾತ್ರ ಉಳಿದಿದ್ದಾರೆ. ಒಬ್ಬರಲ್ಲ ಇಬ್ಬರಲ್ಲ ಐದು ಮಂದು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆ ಒಳಗೆ ಪ್ರವೇಶಿಸಿದ್ದಾರೆ. ಆದರೆ ಇದರಲ್ಲಿ ಇಬ್ಬರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನಲಾಗ್ತಿದೆ.

ಈ ಬಾರಿ ಅಗ್ನಿ ಪರೀಕ್ಷೆ ನಡೆಸಿ ಸಾಮಾನ್ಯರನ್ನು ಮನೆ ಒಳಗೆ ಕಳುಹಿಸುವ ಪ್ರಯತ್ನ ನಡೆದಿತ್ತು. ಕುಮಾರಿ ಹಾಗೂ ಲಕ್ಷ್ಮಿ ಗೌಡ ಸೇರಿ ಒಟ್ಟು ಆರು ಜನ ಹೀಗೆ ಅಗ್ನಿಪರೀಕ್ಷೆಯಲ್ಲಿ ಇದ್ದವರು ಬಿಗ್‌ಬಾಸ್ ಮನೆ ಸೇರಿದ್ದಾರೆ. ಇದರಲ್ಲಿ ಕುಮಾರಿ ಹಾಗೂ ಅಶ್ವಿನಿ ಗೌಡ ಬರೀ ಅತಿಥಿಗಳ ರೀತಿ ಮನೆ ಒಳಗೆ ಹೋಗಿದ್ದಾರೆ ಎನ್ನಲಾಗ್ತಿದೆ. ಅವ್ರು ಫಿನಾಲೆವರೆಗೂ ಮನೆಯಲ್ಲಿ ಉಳಿಯುವುದು ಅನುಮಾನ. ಫಿನಾಲೆಗೂ ಹೋದ್ರು ಟಾಪ್ 3 ಸ್ಥಾನಗಳಿಗೆ ಪರಿಗಣಿಸುವುದಿಲ್ಲ ಎನ್ನುವ ಚರ್ಚೆ ನಡೀತಿದೆ.

ಐದು ವಾರಗಳ ಬಳಿಕ ಕುಮಾರಿ ಹಾಗೂ ಅಶ್ವಿನಿ ಗೌಡ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದರು. ಆರೋಗ್ಯ ಸಮಸ್ಯೆಯಿಂದ ಒಂದಿಬ್ಬರು ಮನೆಯಿಂದ ಹೊರಗೆ ಬರುವಂತಾಗಿತ್ತು. ಅವರ ಸ್ಥಾನ ತುಂಬಲು ಇವರನ್ನು ಮನೆ ಒಳಗೆ ಕಳುಹಿಸಿದಂತೆ ಕಾಣ್ತಿದೆ. ಇನ್ನುಳಿದಂತೆ ಗಾನವಿ ಗೌಡ, ಸೋನಿಕಾ ಗೌಡ, ಪ್ರಶಾಂತ್ ಗೌಡ ಕೂಡ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ಅವರಿಗೆ ಫಿನಾಲೆವರೆಗೂ ತಲುಪುವ ಅವಕಾಶ ಇದೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ಇದೆಲ್ಲದರ ನಡುವೆ ವೀಕೆಂಡ್ ಬಂದಿದೆ. ಕಿಚ್ಚನ ಪಂಚಾಯ್ತಿ ನಡೀತಿದೆ. ಈ ವಾರ ಯಾರು ಮನೆಯಿಂದ ಹೊರ ಬರುತ್ತಾರೆ ಎನ್ನುವ ಕುತೂಹಲ ಮೂಡಿದೆ. ಆಸಿಯಾ, ಸೋನಿಕಾ, ಕುಮಾರಿ, ಲಕ್ಷ್ಮಿ, ತಾಂಡವ್ ಈ ವಾರ ನಾಮಿನೇಟ್ ಲಿಸ್ಟ್‌ನಲ್ಲಿದ್ದಾರೆ. ಐವರಲ್ಲಿ ಯಾರಿಗೆ ಈ ವಾರ ಬಿಗ್‌ಬಾಸ್ ಜರ್ನಿ ಮುಗಿಯುತ್ತೆ ಕಾದು ನೋಡಬೇಕು.