ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಸಿನಿಮಾ ಪ್ರಚಾರ ಕೂಡ ಚುರುಕು ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಚಿತ್ರತಂಡ ಹೊಸ ಟ್ರೈಲರ್ ಹಾಗೂ ಮೇಕಿಂಗ್ ವೀಡಿಯೋ ಹಂಚಿಕೊಂಡಿತ್ತು. ಇದೀಗ ಹೈದರಾಬಾದ್ ಪ್ರೀ-ರಿಲೀಸ್ ಈವೆಂಟ್ ಬೆನ್ನಲ್ಲೇ ಚಿತ್ರದ ಮತ್ತೊಂದು ಹಾಡು ಅನಾವರಣವಾಗಿದೆ. ರಾವಣನ ಅವತಾರದಲ್ಲಿ ಯಶ್ ತಾಂಡವ ನೃತ್ಯ ಮಾಡಿರುವುದನ್ನು ನೋಡಬಹುದು.
ಶಿವನ ಪರಮಭಕ್ತ ರಾವಣ. ಇಷ್ಟದೈವವನ್ನು ಒಲಿಸಿಕೊಳ್ಳಲು ರಾವಣ ತಪಸ್ಸು ಮಾಡುವುದು ಗೊತ್ತೇಯಿದೆ. ಇನ್ನು ಲಂಕಾಧಿಪತಿ ತಾಂಡವ ನೃತ್ಯ ಮಾಡಿ ಶಿವನನ್ನು ಮೆಚ್ಚಿಸುವ ಸನ್ನಿವೇಶವೂ ಚಿತ್ರದಲ್ಲಿದೆ. ಆರಂಭದಲ್ಲಿ ಶಿವ ತಾಂಡವ ಸ್ತ್ರೋತ್ರವನ್ನು ಬಳಸಿಕೊಂಡು ಎ. ಆರ್ ರಹಮಾನ್ ಹೊಸ ಹಾಡು ಕಂಪೋಸ್ ಮಾಡಿದ್ದಾರೆ. ಡಾ. ಕುಮಾರ್ ವಿಶ್ವಾಸ್ ಸಾಹಿತ್ಯ ಬರೆದಿದ್ದು 'ರಾವಣ ತಾಂಡವ' ಹಾಡನ್ನು ವಿಶಾಲ್ ದದ್ಲಾನಿ ಹಾಡಿದ್ದಾರೆ. ಶಿವನ ದೊಡ್ಡ ವಿಗ್ರಹದ ಮುಂದೆ ಯಶ್ ತಾಂಡವ ನೃತ್ಯ ಮಾಡುವುದನ್ನು ನೋಡಬಹುದು.
ಮೊದಲ ನೋಟದಲ್ಲೇ 'ರಾವಣ ತಾಂಡವ' ಹಾಡು ವಾಹ್ ಎನ್ನುವಂತಿದೆ. ಯಶ್ ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ. ಸ್ಮಾಲ್ ಸ್ಕ್ರೀನ್‌ನಲ್ಲೇ ಇಷ್ಟು ಮಜವಾಗಿದೆ ಎನ್ನುವ ದೊಡ್ಡ ಪರದೆಯಲ್ಲಿ ಅದ್ಭುತ ಅನುಭವ ನೀಡುವುದು ಗ್ಯಾರಂಟಿ ಎಂದು ಕಾಮೆಂಟ್ ಮಾಡ್ತಿದ್ದಾರೆ. ಎ. ಆರ್ ರಹಮಾನ್ ಜೊತೆಗೆ ಹ್ಯಾನ್ಸ್ ಝಿಮ್ಮರ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಹಾಲಿವುಡ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಇತ್ತೀಚೆಗೆ ಬಂದ ಹೊಸ ಟ್ರೈಲರ್ ಕೂಡ ಅದ್ಭುತ ರೆಸ್ಪಾನ್ಸ್ ಪಡೆದಿಕೊಂಡಿತ್ತು. ಇದೀಗ 'ರಾವಣ ತಾಂಡವ' ಹಾಡಿನ ಸರದಿ. ಬಹಳ ಅದ್ಧೂರಿಯಾಗಿ ಹಾಡನ್ನು ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ಇದು ಹೈಲೆಟ್ ಆಗುವುದರಲ್ಲಿ ಎರಡು ಮಾತಿಲ್ಲ. ಎರಡು ಭಾಗಗಳಾಗಿ 'ರಾಮಾಯಣ' ಚಿತ್ರ ತೆರೆಗೆ ಬರ್ತಿದೆ. ಮೊದಲ ಭಾಗದಲ್ಲಿ ಸೀತಾಪಹರಣದವರೆಗೆ ಮಾತ್ರ ಕಥೆ ಇರಲಿದೆ. ಹಾಗಾಗಿ ರಾವಣನಾಗಿ ಯಶ್ ತೆರೆಮೇ 10 ನಿಮಿಷ ಮಾತ್ರ ಕಾಣಿಸಿಕೊಳ್ತಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಆದರೆ ಟ್ರೈಲರ್, ಸಾಂಗ್ ನೋಡಿದ್ರೆ ರಣ್‌ಬೀರ್ ಕಪೂರ್ ಸ್ಕ್ರೀನ್ ಪ್ರೆಸೆನ್ಸ್ ಯಶ್ ಮೀರಿಸುವಂತೆ ಕಾಣ್ತಿದೆ.
ನವೆಂಬರ್ 5ರಂದು 'ರಾಮಾಯಣ' ಚಿತ್ರದ ಮೊದಲ ಭಾಗ ತೆರೆಗೆ ಬರಲಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಸಹ ಶುರುವಾಗಿದೆ. ಆಯ್ದ ಚಿತ್ರಮಂದಿರಗಳಲ್ಲಿ ಸಿನಿರಸಿಕರು ಮೊದಲ ದಿನದ ಟಿಕೆಟ್ ಕಾಯ್ದಿರಿಸುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ.