'ಪ್ರೇಮದ ಊರಲಿ' ಯಶಸ್ಸು ಸ್ಟಾರ್ ನಟರನ್ನು ಚಿಂತೆಗೆ ಹಚ್ಚಿದೆ. ಜನಕ್ಕೆ ಬೇಕಾಗಿರುವುದು ಏನು ? ನಾವು ಮಾಡುತ್ತಿರುವುದು ಏನು ಎಂದು ಯೋಚಿಸುವಂತಾಗಿದೆ. ಈ ಸಣ್ಣ ಸಿನಿಮಾ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಸೆಡ್ಡು ಹೊಡೆಯುತ್ತಿದೆ. 'ಜೈಲರ್-2' ಆರ್ಭಟದ ಎದುರು ಕೂಡ 'ಪ್ರೇಮದ ಊರಲಿ' ದರ್ಬಾರ್ ಮುಂದುವರೆದಿದೆ. ನಟ ಯಶ್ ಕೂಡ ಈ ಸಿನಿಮಾ ಗೆಲುವಿನ ಬಗ್ಗೆ ಮಾತನಾಡಿದ್ದಾರೆ.
'ರಾಮಾಯಣ' ಸಿನಿಮಾ ಸುದ್ದಿಗೋಷ್ಠಿಯಲ್ಲಿ 'ಪ್ರೇಮದ ಊರಲಿ' ಗೆಲುವಿನ ಬಗ್ಗೆ ಯಶ್ ಪ್ರತಿಕ್ರಿಯಿಸಿದರು. ಚಿತ್ರತಂಡವನ್ನು ಸಹ ಭೇಟಿ ಮಾಡಿ ಮಾತನಾಡಿ ಬೆಂಬಲ ಸೂಚಿಸಿದ್ದಾರೆ. "ಪ್ರೇಮದ ಊರಲಿ' ಗೆಲುವು ನನಗೆ ಬಹಳ ಖುಷಿ ತಂದಿದೆ. ಆ ತಂಡವನ್ನು ಭೇಟಿ ಮಾಡಿದಾಗ ಅವರ ಕಣ್ಣಲ್ಲಿ ಆ ಖುಷಿ ನೋಡ್ದೆ. ಚಿತ್ರರಂಗಕ್ಕೆ ಎರಡೂ ತರಹದ ಸಿನಿಮಾಗಳು ಬೇಕು.. ಹೊರಗಡೆ ಹೋಗಿ ಎಲ್ಲೆ ಮೀರಿ ಗೆಲ್ಲುವ ಕೆಲಸ ಮಾಡಬೇಕು.. ಅದೇ ರೀತಿ ನಮ್ಮ ಅಡಿಪಾಯವನ್ನು ಸಹ ಗಟ್ಟಿಮಾಡಿಕೊಳ್ಳಬೇಕು. ಹೊಸ ಹೊಸ ಪ್ರತಿಭೆಗಳು ಬರಬೇಕು. ಕನ್ನಡಿಗರು ಇಂತಹ ಯಶಸ್ಸು ಕೊಟ್ಟಿರುವುದು ನಮಗೆ ಧೈರ್ಯ ಕೊಡುತ್ತೆ" ಎಂದಿದ್ದಾರೆ.
ನಟ ಶ್ರೀಮುರಳಿ ಕೂಡ 'ಪ್ರೇಮದ ಊರಲಿ' ಚಿತ್ರದ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. 'ದಿಲ್ದಾರ್' ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿ ಆಗಿ ಮಾತನಾಡಿದ ರೋರಿಂಗ್ ಸ್ಟಾರ್ "ಪ್ರೇಮದ ಊರಲಿ' ಚಿತ್ರದಿಂದ ಇಂಡಸ್ಟ್ರಿಗೆ ಒಂದು ವಿಚಾರ ಅರ್ಥವಾಗಿದೆ. ಒಳ್ಳೆ ಸಾಂಗ್ಸ್, ಹೃದಯಕ್ಕೆ ಮುಟ್ಟುವ ಕಥೆ ಇದ್ದುಬಿಟ್ರೆ ಒಳ್ಳೇ ಸಿನಿಮಾ ಆಗುತ್ತೆ.. ಹಂಗೆ ಹಿಂದೆ ಪ್ರಚಾರ ಮಾಡ್ಬೇಕು ಅಂತಾರೆ. ಸಿನಿಮಾ ಚೆನ್ನಾಗಿದ್ರೆ ಮೌತ್ ಪಬ್ಲಿಸಿಟಿ ಮಾಡಿ ಜನ ಗೆಲ್ಲಿಸ್ತಾರೆ. ಒಬ್ಬರು ನೋಡ್ಕೊಂಡು ಬಂದು ಚೆನ್ನಾಗಿದೆ ಅಂದ್ರೆ ಅದು 10 ಜನಕ್ಕೆ ತಲುಪಿ ಅದು ಲಕ್ಷ, ಕೋಟಿ ಆಗುತ್ತೆ.. ಎಷ್ಟು ಖರ್ಚು ಮಾಡ್ತೀವಿ, ಎಷ್ಟು ಆಡಂಬರ ಮಾಡ್ತೀವಿ ಇದ್ಯಾವುದು ಬೇಡ, ಒಳ್ಳೆ ಸಿನಿಮಾ ಮಾಡ್ಬೇಕು" ಎಂದಿದ್ದಾರೆ.