ನೆಲ್ಸನ್ ನಿರ್ದೇಶನದ 'ಜೈಲರ್- 2' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಎರಡು ದಿನಕ್ಕೆ 200 ಕೋಟಿ ರೂ. ಕಲೆಕ್ಷನ್ ಮಾಡಿ ಸಿನಿಮಾ ದರ್ಬಾರ್ ನಡೆಸ್ತಿದೆ. ಅಭಿಮಾನಿಗಳು ಬಯಸಿದ್ದನ್ನು ತೆರೆಮೇಲೆ ತಂದು ನಿರ್ದೇಶಕರು ಗೆದ್ದಿದ್ದಾರೆ. ಶಿವರಾಜ್ಕುಮಾರ್, ಮೋಹನ್ ಲಾಲ್ ಹಾಗೂ ಹೃತಿಕ್ ರೋಷನ್ ಗೆಸ್ಟ್ ಅಪಿಯರೆನ್ಸ್ ಚಿತ್ರಕ್ಕೆ ಹೆಚ್ಚಿನ ಮೆರಗು ನೀಡಿದೆ.
ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ತೆರೆಗೆ ಬಂದಿದೆ. ಲಾಜಿಕ್ ಇಲ್ಲದೇ ಬರೀ ರಜನಿಕಾಂತ್ ಮ್ಯಾಜಿಕ್ ಅನ್ನೇ ನಂಬಿಕೊಂಡು ನೆಲ್ಸನ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಆ ಪ್ರಯತ್ನದಲ್ಲಿ ಭಾಗಶಃ ಗೆದ್ದಿದ್ದಾರೆ. ಅತಿಥಿ ಪಾತ್ರಗಳಲ್ಲಿ ಶಿವಣ್ಣ ಹಾಗೂ ಹೃತಿಕ್ಗೆ ಹೆಚ್ಚಿನ ಅವಕಾಶ ಸಿಕ್ಕಿದೆ. ಮೋಹನ್ ಲಾಲ್ ಕೆಲವೇ ಕ್ಷಣಗಳು ತೆರೆಮೇಲೆ ಬರ್ತಾರೆ. ಇದು ಕೆಲವರ ಬೇಸರಕ್ಕೆ ಕಾರಣವಾಗಿದೆ.
ಟ್ರೈಲರ್ನಲ್ಲಿದ್ದ ಒಂದಷ್ಟು ಫ್ರೇಮ್ಗಳು ಕೂಡ ಚಿತ್ರದಲ್ಲಿ ಇಲ್ಲದೇ ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಅದರ ಅರ್ಥ ಚಿತ್ರೀಕರಿಸಿದ್ದ ಮೋಹನ್ ಲಾಲ್ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಎರಡು ಮುಕ್ಕಾಲು ಗಂಟೆ ಚಿತ್ರ ನೋಡಿದವರು ಇನ್ನೆರಡು ನಿಮಿಷ ನೋಡುತ್ತಿರಲಿಲ್ಲವೇ ಎಂದು ಕೆಲವರು ಬೇಸರ ಹೊರ ಹಾಕಿದ್ದಾರೆ. 'ಜೈಲರ್- 2' ಚಿತ್ರದಲ್ಲಿ ಮೋಹನ್ ಲಾಲ್ ಅವರಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದ ಜಿಶಾದ್ ಶಮ್ಸುದ್ದೀನ್ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ರನ್ ಟೈಮ್ ಜಾಸ್ತಿ ಆಯ್ತು ಎನ್ನುವ ಕಾರಣಕ್ಕೆ ಮೋಹನ್ ಲಾಲ್ ಅವರ ಒಂದು ದೃಶ್ಯಕ್ಕೆ ಕತ್ತರಿ ಹಾಕಿದ್ದಾರೆ ಎನ್ನಲಾಗ್ತಿದೆ. ಇದೇ ಈಗ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನುಳಿದಂತೆ ಶಿವಣ್ಣ, ಮೋಹನ್ ಲಾಲ್, ಹೃತಿಕ್ ಹಾಗೂ ಜಾಕಿಶ್ರಾಫ್ಗೆ ತಲಾ ಒಂದೊಂದು ಸನ್ನಿವೇಶದಲ್ಲಿ ಎಂಟ್ರಿ ಹಾಗೂ ಒಂದು ದೃಶ್ಯದಲ್ಲಿ ಎಲಿವೇಷನ್ ಕೊಟ್ಟು ಪ್ರೇಕ್ಷಕರನ್ನು ರಂಜಿಸಲು ಪ್ರಯತ್ನಿಸಿರುವುದು ಗೊತ್ತಾಗುತ್ತದೆ. ಶಿವಣ್ಣನಿಗೆ ಇನ್ನೆರಡು ದೃಶ್ಯ ಜಾಸ್ತಿ ಸಿಕ್ಕಿದೆ. ಇಂಟರ್ವಲ್ನಲ್ಲಿ ಶಿವಣ್ಣ, ಮೋಹನ್ ಲಾಲ್ ಹಾಗೂ ಜಾಕಿಶ್ರಾಫ್ ಸಣ್ಣ ಸನ್ನಿವೇಶದಲ್ಲಿ ಬಂದು ಕಿಕ್ ಕೊಡ್ತಾರೆ. ಬಳಿಕ ಮೋಹನ್ ಲಾಲ್ ದರ್ಶನವಾಗಲು ಕ್ಲೈಮ್ಯಾಕ್ಸ್ವರೆಗೂ ಕಾಯಬೇಕು.
ಕ್ಲೈಮ್ಯಾಕ್ಸ್ನಲ್ಲಿ ಲಾಲೆಟ್ಟನ್ಗಾಗಿಯೇ ಸ್ಪೆಷಲ್ ಎಲಿವೇಷನ್ ಸೀನ್ ಇದೆ. ಅಲ್ಲಿ ಶಿವಣ್ಣ, ಜಾಕಿಶ್ರಾಫ್ಗೆ ಹೆಚ್ಚು ಕೆಲಸ ಇಲ್ಲ. ಹಾಗಾಗಿ ಮೋಹನ್ ಲಾಲ್ ನಟಿಸಿರುವ ಮತ್ತೊಂದು ದೃಶ್ಯಕ್ಕೆ ಕತ್ತರಿ ಬಿದ್ದಿರುವಂತೆ ಕಾಣ್ತಿದೆ. ಚಿತ್ರದ ವೇಗಕ್ಕೆ ಮೋಹನ್ ಲಾಲ್ ದೃಶ್ಯ ಬೇಡವಾಗಿತ್ತು ಎಂದು ಕೈಬಿಟ್ಟಿರಬಹುದು. ಬೇರೆ ಯಾವುದಾದರೂ ಅನಗತ್ಯ ದೃಶ್ಯ ಕತ್ತರಿಸಿ, ಮೋಹನ್ ಲಾಲ್ ದೃಶ್ಯವನ್ನು ಉಳಿಸಿಕೊಳ್ಳಬಹುದಿತ್ತು ಎನ್ನುವವರು ಇದ್ದಾರೆ. ಮೋಹನ್ ಲಾಲ್ ಆರ್ಭಟದ ಮುಂದೆ ಮಂಕಾಗಿ ಬಿಡುವ ಭಯದಿಂದ ರಜನಿಕಾಂತ್ ಹೀಗೆ ಮಾಡಿಸಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಲಾಲೆಟ್ಟನ್ ಗಮನಕ್ಕೆ ತಂದೇ ನಿರ್ದೇಶಕರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನುವ ಗೊತ್ತಾಗುತ್ತಿದೆ.