ತಮ್ಮ ಕಾಮಿಡಿ ಮೂಲಕವೇ ಸಿನಿಮಾಗಳನ್ನು ಗೆಲ್ಲಿಸಿದವರು ತಮಿಳು ಹಾಸ್ಯ ನಟ ವಡಿವೇಲು. ಇತ್ತೀಚೆಗೆ ಅವರು ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ಸದ್ಯ ದುಬಾರಿ ಬಂಗಲೆ ಕಟ್ಟಿಸಿ ವಡಿವೇಲು ಸುದ್ದಿಯಲ್ಲಿದ್ದಾರೆ. ಸುಮಾರು 200 ಜನರಿಗಾಗಿ ಮನೆ ಕಟ್ಟಿಸಿರುವುದಾಗಿ ಅವರು ಹೇಳಿದ್ದಾರೆ.

ವಡಿವೇಲು ಹೋಂ ಟೂರ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಮಧುರೆಯಲ್ಲಿ ಅವರು ಮನೆ ನಿರ್ಮಾಣ ಮಾಡಿದ್ದಾರೆ. ಇದು 100 ಕೋಟಿ ರೂ. ಮೌಲ್ಯದ ಮನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿದೆ. ಜಾಲಿ ವಸಂತ್ ಯೂಟ್ಯೂಬ್ ಚಾನಲ್‌ನಲ್ಲಿ ವಡಿವೇಲು ಹೊಸ ಮನೆಯ ವೀಡಿಯೋ ನೋಡಬಹುದು. ಮೂರು ಎಕರೆ ಜಾಗದಲ್ಲಿ ಮನೆ ಕಟ್ಟಿಸಲಾಗಿ ಎಂದು ವಡಿವೇಲು ಹೇಳಿದ್ದಾರೆ. ಮನೆಯ ಸುತ್ತಾ 42 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಮನೆಯ ಮುಂದೆ ಮಾವು, ಸಪೋಟ ಸೇರಿ ವಿವಿಧ ಬಗೆಯ ಹಣ್ಣಿನ ಮರಗಳನ್ನು ಬೆಳೆಸುತ್ತಿದ್ದಾರೆ. ತಮ್ಮದು 200 ಜನರ ದೊಡ್ಡ ಕುಟುಂಬ, ನೆಂಟರು ಎಲ್ಲರೂ ಸೇರಿ ಅಷ್ಟು ಜನ ಇದ್ದೀವಿ. ಅವರಿಗೆಲ್ಲಾ ನಾನು ಒಬ್ನೆ. ಆಗಾಗ್ಗೆ ಎಲ್ಲರೂ ಈ ಮನೆಯಲ್ಲಿ ಸೇರ್ತೀವಿ. ಫಂಕ್ಷನ್ ತರ ಎಲ್ಲರಿಗೂ ಊಟದ ವ್ಯವಸ್ಥೆ ಆಗುತ್ತದೆ. ಎಲ್ಲರೂ ಎಂಜಾಯ್ ಮಾಡ್ತೀವಿ ಎಂದು ವಡಿವೇಲು ಸ್ವತಃ ಹೇಳಿದ್ದಾರೆ.

ಬಡ ಕುಟುಂಬದಿಂದ ಬಂದ ವಡಿವೇಲು ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸುತ್ತಾ ಮುಂದೆ ತಮಿಳು ಚಿತ್ರರಂಗದ ಬಹುಬೇಡಿಕೆಯ ಹಾಸ್ಯನಟ ಎನಿಸಿಕೊಂಡರು. ಎಲ್ಲಾ ಸ್ಟಾರ್ ನಟರ ಜೊತೆಗೂ ತೆರೆ ಹಂಚಿಕೊಂಡರು. ಮೊದಲು ವಡಿವೇಲು ಕಾಲ್‌ ಶೀಟ್ ತಗೊಳ್ಳಿ, ಬಳಿಕ ನನ್ನ ಕಾಲ್‌ಶೀಟ್ ಕೊಡ್ತೀನಿ ಎಂದು ರಜನಿಕಾಂತ್ ಹೇಳುವಷ್ಟು ಅವ್ರು ಬ್ಯುಸಿಯಾಗಿಬಿಟ್ಟಿದ್ದರು. ತಮ್ಮ ಕಾಮಿಡಿ ಟೈಮಿಂಗ್ ಮೂಲಕ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಗಿಸಿದರು. ಕೊನೆಗೆ ಹೀರೊ ಕೂಡ ಆಗಿ ಒಂದಷ್ಟು ಸಿನಿಮಾಗಳಲ್ಲಿ ಮಿಂಚಿದ್ದರು.

ಇತ್ತೀಚೆಗೆ ಧನುಷ್ ಜೊತೆ ಒಂದು ಚಿತ್ರದಲ್ಲಿ ನಟಿಸೋಕೆ ಒಪ್ಪಿಕೊಂಡಿದ್ದಾರೆ. ಕೆಲ ವರ್ಷಗಳ ಕಾಲ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇತ್ತು. ಮೂರನೇ ವ್ಯಕ್ತಿ ಮಾತು ಕೇಳಿ ಹೀಗಾಯ್ತು ಎಂದು ಸ್ವತಃ ವಡಿವೇಲು ಹೇಳಿಕೊಂಡಿದ್ದರು. ಮತ್ತೆ ಇಬ್ಬರೂ ಒಟ್ಟಾಗಿ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದರು. ವಡೀವೇಲು ತಮ್ಮ ಮನೆಯ ಮೌಲ್ಯ ಎಷ್ಟು ಎಂದು ಹೇಳಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಇದು 100 ಕೋಟಿ ರೂ. ಮೌಲ್ಯದ ಮನೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.