ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಮುಂಬೈನಲ್ಲಿ ಇಂದು ಸಂಜೆ ಗುಂಡಿನ ದಾಳಿ ನಡೆದಿದೆ. ಮುಂಬೈನ ಜುಹು ಪ್ರದೇಶದಲ್ಲಿ ನಟ ತಮ್ಮ ಬಿಎಂಡಬ್ಲು ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ದುಷ್ಕರ್ಮಿಗಳು ಈ ದಾಳಿ ನಡೆಸಿದ್ದು ಅವರಿಗೆ ಯಾವುದೇ ಹಾನಿ ಆಗಿಲ್ಲ. ಪೊಲೀಸರು ಈಗಾಗಲೇ ಆರೋಪಿಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ.
ನಟ ಜಾಕಿ ಶ್ರಾಫ್ ಹಾಗೂ ನಟಿ ಆಯೇಷಾ ದತ್ ಪುತ್ರ ಟೈಗರ್ ಶ್ರಾಫ್ ಪೋಷಕರು ರೀತಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಇದೀಗ ಅವರ ಮೇಲೆ ಬೈಕ್ನಲ್ಲಿ ಬಂದ ಮೂವರು ಆಗಂತುಕರು 3 ಸುತ್ತು ಗುಂಡಿನ ದಾಳಿ ನಡೆಸಿರುವುದು ಅಭಿಮಾನಿಗಳಿಗೆ ಆತಂಕ ತಂದಿದೆ. ಈ ಸುದ್ದಿ ಕೇಳಿ ಇಡೀ ಮುಂಬೈ ನಗರ ಬೆಚ್ಚಿ ಬಿದ್ದಿದೆ. ದಾಳಿಯಲ್ಲಿ ಟೈಗರ್ ಶ್ರಾಫ್ ಕಾರು ಚಾಲಕ ಹಾಗೂ ಓರ್ವ ಸಿಬ್ಬಂದಿಗೆ ಪೆಟ್ಟಾಗಿದೆ. ಆಟೋ ಚಾಲಕರಿಬ್ಬರು ಸಹ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾಳಿಯಲ್ಲಿ ನಟ ಟೈಗರ್ ಶ್ರಾಫ್ಗೆ ಗುಂಡೇಟಿನಿಂದ ಯಾವುದೇ ಗಾಯಗಳಾಗಿಲ್ಲ ಎಂದು ಡಿಸಿಪಿ ಮೋಹಿತ್ ಗಾರ್ಗ್ ಖಚಿತಪಡಿಸಿದ್ದಾರೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಪೊಲೀಸರು ಆ ಪ್ರದೇಶವನ್ನು ಸುತ್ತುವರಿದು, ದುಷ್ಕರ್ಮಿಗಳನ್ನು ಪತ್ತೆಹಚ್ಚಲು 12 ತಂಡಗಳಾಗಿ ಕಣಕ್ಕಿಳಿದಿದ್ದಾರೆ. ಘಟನೆ ಬೆನ್ನಲ್ಲೇ ಆಡಿಯೋ ಕ್ಲಿಪ್ ಒಂದರಲ್ಲಿ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಪ್ರತಿನಿಧಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಈ ದಾಳಿಯ ಹೊಣೆಗಾರಿಕೆ ಹೊತ್ತಿದ್ದಾನೆ.
ಅನಿಲ್ ಪಂಡಿತ್ ಎಂಬಾತ "ಟೈಗರ್ ಶ್ರಾಫ್ ತಮ್ಮ ಗ್ಯಾಂಗ್ನ ಸೂಚನೆಗಳನ್ನು ನಿರ್ಲಕ್ಷಿಸಿ, ಸಲ್ಮಾನ್ ಖಾನ್ ಜೊತೆ ನಟಿಸುತ್ತಿದ್ದಾರೆ. ಹಾಗಾಗಿ ಆತನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾಗಿ ಹೇಳಿಕೊಂಡಿದ್ದಾನೆ. "ನಮ್ಮ ಮಾತು ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡುವವರನ್ನು ನಾವು ಕೊಲ್ಲುತ್ತೇವೆ. ಇದೇ ಮೊದಲು ಮತ್ತು ಕೊನೆಯ ಎಚ್ಚರಿಕೆ" ಎಂದು ಹೇಳಿರುವುದು ವೈರಲ್ ಆಗ್ತಿದೆ. ನಾವು ಫೋನ್ ಮಾಡಿ ಟೈಗರ್ ಶ್ರಾಫ್ಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ವ ಕೇಳಲಿಲ್ಲ. ಅದಕ್ಕೆ ಈಗ ಅರ್ಥ ಮಾಡಿಸಿದ್ದೀವಿ ಎಂದಿದ್ದಾರೆ.
ಸದ್ಯ ಲಾರೆನ್ಸ್ ಬಿಷ್ಣೋಯ್ ಗುಜರಾಜ್ ಜೈಲಿನಲ್ಲಿದ್ದಾನೆ. ಪದೇ ಪದೆ ನಟ ಸಲ್ಮಾನ್ ಖಾನ್ ಹತ್ಯೆ ಮಾಡುವುದಾಗಿ ಹೇಳುತ್ತಲೇ ಇದ್ದಾನೆ. ಈ ಹಿಂದೆ ಸಲ್ಮಾನ್ ಖಾನ್ ನಿವಾಸದ ಬಳಿ ಕೂಡ ಗುಂಡಿನ ದಾಳಿ ನಡೆದಿತ್ತು.