ಕನ್ನಡ ಹಾಡು ಹಾಡುವಂತೆ ಮನವಿ ಮಾಡಿದ್ದನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಹೋಲಿಸಿ ಗಾಯಕ ಸೋನು ನಿಗಮ್ ವಿವಾದ ಸೃಷ್ಟಿಸಿದ್ದು ಗೊತ್ತೇಯಿದೆ. ಸೋನು ಹೇಳಿಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡ ಚಿತ್ರರಂಗದಿಂದ ಅವರನ್ನು ಬ್ಯಾನ್ ಮಾಡುವ ಮಟ್ಟಕ್ಕೆ ಹೋಗಿತ್ತು. ಆರಂಭದಲ್ಲಿ ನಾನೇನು ತಪ್ಪು ಮಾಡಿಲ್ಲ ಎನ್ನುವಂತೆ ಮಾತನಾಡಿದ್ದ ಸೋನು ಇದೀಗ ಕ್ಷಮೆ ಕೇಳಿದ್ದಾರೆ.

ಪಹಲ್ಗಾಮ್ ದಾಳಿಗೂ ಮುನ್ನ ಕರ್ನಾಟಕದ ದಂಪತಿಗಳು ಮಾಡಿರುವ ವೀಡಿಯೋವನ್ನು ಸೋನು ನಿಗಮ್ ಪೋಸ್ಟ್ ಮಾಡಿದ್ದರು. ಆ ಮೂಲಕ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಯತ್ನಿಸಿದ್ದರು. ಅದಕ್ಕೂ ಕರವೇ ನಾರಾಯಣ ಗೌಡ ತಿರುಗೇಟು ನೀಡಿದ್ದರು. ಅಂತಿಮವಾಗಿ ನಾರಾಯಣ ಗೌಡರಿಗೆ ಫೋನ್ ಮಾಡಿ ಸೋನು ನಿಗಮ್ ಮಾತನಾಡಿದ್ದಾರೆ. "ಗಾಯಕ ಸೋನು ನಿಗಮ್ ಇಂದು ನನ್ನೊಂದಿಗೆ ಮಾತಾಡಿದರು. ತಾವು ಹಿಂದೆ ಮಾಡಿದ ಒಂದು ಮಾತು ಕನ್ನಡಿಗರನ್ನು ಹೇಗೆ ನೋಯಿಸಿದೆ ಎಂಬುದು ಅವರಿಗೆ ಅರ್ಥವಾಗಿದೆ. ಬೇಷರತ್ತಾಗಿ ಕ್ಷಮೆ ಯಾಚಿಸುವುದಾಗಿ ಅವರು ಹೇಳಿದರು" ಎಂದು ನಾರಾಯಣ ಗೌಡ ಮಾಹಿತಿ ನೀಡಿದ್ದಾರೆ.

ಇದೀಗ ಸೋನು ನಿಗಮ್ ಕ್ಷಮೆ ಯಾಚಿಸಿದ್ದಾರೆ. ಇಲ್ಲಿಗೆ ಇದನ್ನು ಮುಗಿಸುವುದು ಒಳ್ಳೆಯದು. ಕ್ಷಮೆ ಕೇಳಿದವರನ್ನು ಕ್ಷಮಿಸುವುದು ಕನ್ನಡಿಗರ ಔದಾರ್ಯ, ಸಂಸ್ಕಾರ ಎಂದು ನಾರಾಯಣ ಗೌಡ ಟ್ವೀಟ್ ಮಾಡಿದ್ದಾರೆ. ನಾನು ವೈಯಕ್ತಿಕವಾಗಿ ಸಂಗೀತ ಪ್ರೇಮಿ. ಸಂಗೀತ ಮನುಷ್ಯನ ಎಲ್ಲಾ ಸಂಕಟಗಳನ್ನು ಮರೆಸುವ ಸಂಜೀವಿನಿ. ಸೋನು ಅವರು ಇನ್ನಷ್ಟು ಕನ್ನಡ ಗೀತೆಗಳನ್ನು ಹಾಡಲಿ, ಕರ್ನಾಟಕದ ನೆಲದಲ್ಲಿ ಅವರ ಕಾರ್ಯಕ್ರಮಗಳು ನಡೆಯಲಿ. ಸಂಗೀತ ನಮ್ಮ ಬದುಕನ್ನು ಇನ್ನಷ್ಟು ಸಹನೀಯ ಗೊಳಿಸಲಿ, ಪ್ರೀತಿ ಗೆಲ್ಲಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.