ಪ್ರದೋಷ್ ಮಾತ್ರವಲ್ಲ ರೇಣುಕಾಸ್ವಾಮಿ ಪ್ರಕರಣದಲ್ಲಿ ಎ10 ಆರೋಪಿ ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದರು. ಆದರೆ ಈಗ ದಿಢೀರನೆ ಅರ್ಜಿ ಹಿಂಪಡೆದಿದ್ದಾರೆ. ಈ ಸಂಬಂಧ ಅವರ ವಕೀಲರು ನ್ಯಾಯಾಲಯಕ್ಕೆ ಅಧಿಕೃತವಾಗಿ ಮೆಮೋ ಸಲ್ಲಿಸಿದ್ದರು. ಈ ಮೆಮೋ ಪರಿಗಣಿಸಿ 59ನೇ ಸಿಸಿಎಚ್ ನ್ಯಾಯಾಲಯ ವಿನಯ್ ಸಲ್ಲಿಸಿದ್ದ ಮಾಫಿ ಸಾಕ್ಷಿ ಅರ್ಜಿ ವಜಾಗೊಳಿಸಿದೆ. ವಿನಯ್ ನಡೆ ಕುತೂಹಲ ಮೂಡಿಸಿರುವುದು ಸುಳ್ಳಲ್ಲ.
ಈಗಾಗಲೇ ಮಾಫಿ ಸಾಕ್ಷಿಯಾಗಿ ಪ್ರದೋಷ್ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಇದನ್ನು ತಡೆಯಲು ತಮ್ಮ ವಕೀಲರ ಮೂಲಕ ದರ್ಶನ್ ನಡೆಸಿದ ಪ್ರಯತ್ನಗಳೆಲ್ಲಾ ವಿಫಲವಾಗಿತ್ತು. ಕೊನೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ಪ್ರಯೋಜನವಾಗಿರಲಿಲ್ಲ. ಪಟ್ಟಣಗೆರೆ ಶೆಡ್ನಲ್ಲಿ ನಡೆದ ಕ್ರೌರ್ಯವನ್ನು ಪ್ರದೋಷ್ ಎಳೆಎಳೆಯಾಗಿ ನ್ಯಾಯಾಲಯದ ಮುಂದೆ ಬಿಚ್ಚಿಟ್ಟಿದ್ದಾರೆ. ಮೂರು ದಿನಗಳ ಕಾಲ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು.
ಆರ್ಆರ್ ನಗರದ 'ಸ್ಟೋನಿ ಬ್ರೂಕ್' ಪಬ್ ಮಾಲೀಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ವಿನಯ್, ಡಿ-ಗ್ಯಾಂಗ್ ಗುರ್ತಿಸಿಕೊಂಡಿದ್ದ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿಕೊಂಡು ಬಂದ ಬಳಿಕ ವಿನಯ್ ಅವರ ಮಾವ ಜಯಣ್ಣ ಮಾಲೀಕತ್ವದ ಪಟ್ಟಣಗೆರೆ ಶೆಡ್ನಲ್ಲಿ ಕೂಡಿ ಹಾಕಲಾಗಿತ್ತು. ಅಲ್ಲಿಗೆ ದರ್ಶನ್ ಹೋಗಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದರು. ವಿನಯ್ ಕೂಡ ಈ ವೇಳೆ ಸ್ಥಳದಲ್ಲಿ ಇದ್ದರು.
ಎ10 ವಿನಯ್ ಜೊತೆ ಎ7 ರವಿಶಂಕರ್ ಕೂಡ ಮಾಫಿ ಸಾಕ್ಷಿ ಆಗಲು ಬಯಸಿದ್ದರು. ರೇಣುಕಾಸ್ವಾಮಿ ಹತ್ಯೆ ಮತ್ತು ಸಾಕ್ಷ್ಯನಾಶದಲ್ಲಿ ವಿನಯ್ ಪಾತ್ರವಿದೆ ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿತ್ತು. ಪಟ್ಟಣಗೆರೆ ಶೆಡ್ ಕೂಡ ವಿನಯ್ ಸಂಬಂಧಿಕ(ಮಾವ)ರದ್ದು. ವಿನಯ್ ಸಹ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದ. A9 ಧನರಾಜ್ನನ್ನು ದರ್ಶನ್ಗೆ ಪರಿಚಯಿಸಿದ್ದು ಇದೇ ವಿನಯ್. ಪ್ರಕರಣ ಮುಚ್ಚಿಹಾಕಲು ಯತ್ನ ಹಾಗೂ ಸಾಕ್ಷ್ಯನಾಶಕ್ಕೆ ಸ್ಥಳೀಯ ಪೊಲೀಸರೊಬ್ಬರ ಸಲಹೆ ಕೇಳಿದ್ದ ಆರೋಪ ಕೂಡ ವಿನಯ್ ಮೇಲಿದೆ. ಸದ್ಯ ಆರೋಪಿಗಳೆಲ್ಲಾ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.