ರಾಹುಲ್ ಸಂರ್ಕ್ಯೇತನ್ ನಿರ್ದೇಶನದ ಐತಿಹಾಸಿಕ ಕಥಾಹಂದರದ 'ರಣಬಾಲಿ' ಸಿನಿಮಾ ತೆರೆಗಪ್ಪಳಿಸಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಮೂರನೇ ಬರಿ ಈ ಜೋಡಿ ಜೊತೆಯಾಗಿದೆ.

ದೇಶವಿದೇಶಗಳಲ್ಲಿ 'ರಣಬಾಲಿ' ಸಿನಿಮಾ ಬಿಡುಗಡೆಯಾಗಿ ಸದ್ದು ಮಾಡ್ತಿದೆ. ಸೋಲಿನ ಸುಳಿಗೆ ಸಿಲುಕಿರುವ ವಿಜಯ್ ದೇವರಕೊಂಡ ಈ ಬಾರಿ ತನು-ಮನ ಅರ್ಪಿಸಿ ಚಿತ್ರದಲ್ಲಿ ನಟಿಸಿದ್ದಾರೆ. ಗೆದ್ದೆ ಗೆಲ್ಲುವೆ ಎನ್ನುವ ಹುಮ್ಮಸ್ಸಿನಲ್ಲಿದ್ದಾರೆ.

ಕೆಲವೆಡೆ ಬೆಳಗ್ಗೆ 6 ಗಂಟೆಗೆ ಸಿನಿಮಾ ಪ್ರದರ್ಶನ ಆರಂಭವಾಗಿದೆ. ವಿದೇಶಗಳಲ್ಲಿ ಒಂದು ದಿನ ಮುನ್ನವೇ ಪ್ರೇಕ್ಷಕರು ಸಿನಿಮಾ ನೋಡಿದ್ದಾರೆ. ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ತಾಳ್ಮೆ ಪರೀಕ್ಷಿಸುವ ಚಿತ್ರ

ಪ್ರಾಮಾಣಿಕ ಉದ್ದೇಶ, ಆದರೆ ತಾಳ್ಮೆ ಪರೀಕ್ಷಿಸುವ ನಿರೂಪಣೆ.. ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟದ ​​ಕಥೆಗಳನ್ನು ಹೇಳಲು ನಿರ್ದೇಶಕರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆದರೆ, ಅತ್ಯಂತ ನಿಧಾನಗತಿಯ ಚಿತ್ರಕಥೆ ಮತ್ತು ನೀರಸ ನಿರೂಪಣೆಯು ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ದೃಶ್ಯಗಳು ಚಿತ್ರಕ್ಕೆ ಸ್ವಲ್ಪ ರಿಲೀಫ್ ನೀಡುತ್ತವೆ. ಭಾವನಾತ್ಮಕವಾಗಿ ಸಿನಿಮಾ ಕನೆಕ್ಟ್ ಆಗುವುದಿಲ್ಲ. ವಿಜಯ್ ದೇವರಕೊಂಡ ಅವರ ಶ್ರಮ ಎದ್ದು ಕಾಣುತ್ತದೆ ಮತ್ತು ಅವರು ಪ್ರಾಮಾಣಿಕ ಅಭಿನಯ ನೀಡಿದ್ದಾರೆ; ಆದರೂ, ಅವರ ಪಾತ್ರಚಿತ್ರಣ ಮತ್ತು ನಟನಾ ಶೈಲಿ ಕೆಲವೊಮ್ಮೆ ವಿಚಿತ್ರವೆನಿಸುತ್ತವೆ. ಬಿಜಿಎಂ ತೀರಾ ನಿರಾಶಾದಾಯಕವಾಗಿದೆ ಎಂದು Venkyreviews ಟ್ವೀಟ್ ಮಾಡಿದ್ದಾರೆ.

ವಿಜಯ್ ನಟನೆ ಅದ್ಭುತ

ಬ್ಲಾಕ್‌ಬಸ್ಟರ್ ಸಿನಿಮಾ.. ವಿಜಯ್ ದೇವರಕೊಂಡ ಅಣ್ಣ ನಿಮ್ಮ ಅಭಿನಯವನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ರಶ್ಮಿಕಾ ನಿಮ್ಮ ಅಭಿನಯ ಅದ್ಭುತ.. ರಾಹುಲ್ ಪ್ರತಿಯೊಂದು ದೃಶ್ಯದಲ್ಲೂ ಸೂಕ್ಷ್ಮ ವಿವರಗಳೊಂದಿಗೆ ನೀವು ನೀಡಿದ ನಿರ್ದೇಶನ ಅತ್ಯುತ್ತಮವಾಗಿದೆ. ಅಜಯ್ ಅತುಲ್ ನಿಮ್ಮ ಹಿನ್ನೆಲೆ ಬಿಜಿಎಂ ಅದ್ಭುತವಾಗಿದೆ ಎಂದು ವರುಣ್ ರಾಜ ವಾಸಿರೆಡ್ಡಿ ಎಂಬುವವರು ಬರೆದುಕೊಂಡಿದ್ದಾರೆ.

ಅದ್ಭುತ ಸಿನಿಮಾ

ಕಥೆಯಿಂದ ಹಿಡಿದು ಚಿತ್ರಕಥೆಯವರೆಗೆ ರಾಹುಲ್ ಅದ್ಭುತವಾಗಿ ಕೆಲಸ ಮಾಡಿದ್ದಾರೆ.

ವಿಜಯ್-ರಶ್ಮಿಕಾ ತುಂಬಾ ಸುಂದರವಾಗಿದ್ದಾರೆ, ಅವರಿಬ್ಬರ ಕೆಮಿಸ್ಟ್ರಿ ಅತ್ಯಂತ ಸೊಗಸಾಗಿದೆ. ಸಂಗೀತ ಅದ್ಭುತ..ಜಯಮ್ಮ ಎಂದಿನಂತೆ ಅಬ್ಬರಿಸಿದ್ದಾರೆ. ವಿಜಯ್ ದೇವರಕೊಂಡ ಇಲ್ಲಿಂದ ನಿಮಗೊಂದು ದೊಡ್ಡ ಅಪ್ಪುಗೆ. ನೀವು ಇದಕ್ಕೆ ಸಂಪೂರ್ಣ ಅರ್ಹರು ಎನ್ನುವುದು ಮತ್ತೊಬ್ಬರ ಅಭಿಪ್ರಾಯ.

ಫಸ್ಟ್ ಹಾಫ್ ಸೂಪರ್

ಸ್ವಾತಂತ್ರ್ಯಪೂರ್ವ ಕಾಲದ ಆಕ್ಷನ್ ಕಥಾಹಂದರಕ್ಕೆ ಫ್ಯಾಂಟಸಿ ಅಂಶಗಳನ್ನು ಬೆರೆಸಿ, ಅತ್ಯಂತ ಪರಿಣಾಮಕಾರಿಯಾಗಿ 'ಮಾಸ್' ಶೈಲಿಯಲ್ಲಿ ಪ್ರಸ್ತುತಪಡಿಸಿದ ಚಿತ್ರವೇ ರಣಬಾಲಿ. ಒಟ್ಟಾರೆಯಾಗಿ ಸಿನಿಮಾ ಚೆನ್ನಾಗಿದೆ. ಮೊದಲಾರ್ಧ ಅತ್ಯುತ್ತಮವಾಗಿದ್ದರೆ, ದ್ವಿತೀಯಾರ್ಧವು ಚೆನ್ನಾಗಿದ್ದರೂ ಕೊಂಚ ಎಳೆದಂತೆ ಭಾಸವಾಗುತ್ತದೆ.