'ಪ್ರೇಮದ ಊರಲಿ' ಸಿನಿಮಾ ಆರ್ಭಟ ಹೇಗಿದೆ ಎನ್ನುವುದನ್ನು ಬಿಡಿಸಿ ಹೇಳುವುದು ಬೇಕಿಲ್ಲ. ದಿನದಿಂದ ದಿನಕ್ಕೆ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಲೇ ಇದೆ. ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಲ್ಲಿ ಕೂಡ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಒಳ್ಳೆ ಸಿನಿಮಾ ಬಂದ್ರೆ ಗಡಿ ಮೀರಿ ಸದ್ದು ಮಾಡುತ್ತದೆ ಎನ್ನುವುದಕ್ಕೆ ಇದು ಒಳ್ಳೆ ಉದಾಹರಣೆ.
ತೆಲುಗಿಗೆ 'ಪ್ರೇಮದ ಊರಲಿ' ಸಿನಿಮಾ ಡಬ್ ಆಗಿ ಬಿಡುಗಡೆಯಾಗಿದೆ. ಇನ್ನುಳಿದಂತೆ ಕನ್ನಡದಲ್ಲೇ ದೇಶವಿದೇಶಗಳಲ್ಲಿ ಸಿನಿಮಾ ತೆರೆಗಪ್ಪಳಿಸಿದೆ. ತಮಿಳುನಾಡಿನಲ್ಲಿ ಕೂಡ ಕನ್ನಡ ವರ್ಷನ್ ಪ್ರದರ್ಶನವಾಗ್ತಿದೆ. ಒಂದು ಚಿತ್ರಮಂದಿರದಲ್ಲಿ ಸಿನಿಮಾ ದಾಖಲೆ ಬರೆದಿದೆ. ಚಿತ್ರಮಂದಿರದ ಮಾಲೀಕರೆ ಇದನ್ನು ನೋಡಿ ಬೆರಗಾಗಿದ್ದಾರೆ. ತಮಿಳುನಾಡಿನಲ್ಲಿ ಕನ್ನಡ ಸಿನಿಮಾ ಈ ಪಾಟಿ ಪ್ರದರ್ಶನ ಕಾಣುವುದು ನಿಜಕ್ಕೂ ತಮಾಷೆಯ ಮಾತಲ್ಲ.
'ಕೆಜಿಎಫ್' ಸರಣಿ ಹಾಗೂ 'ಕಾಂತಾರ' ಸಿನಿಮಾಗಳು ತಮಿಳುನಾಡಿನಲ್ಲಿ ಸಖತ್ ಸದ್ದು ಮಾಡಿದ್ದವು. ಆದರೆ ಸ್ಟಾರ್ ನಟರಿಲ್ಲದ, ಕೇವಲ ಒಂದೂವರೆ ಕೋಟಿ ಬಜೆಟ್ ಸಿನಿಮಾ ಮಾಡಿರುವ ಮ್ಯಾಜಿಕ್ ಅಷ್ಟಿಷ್ಟಲ್ಲ. ತಮಿಳು ಪ್ರೇಕ್ಷಕರು ಮುಗಿಬಿದ್ದು ಪ್ರೇಮದ ಊರಿನ ಮೆರವಣಿಗೆ ನೋಡುತ್ತಿದ್ದಾರೆ.
40 ಸಾವಿರ ಟಿಕೆಟ್ ಸೇಲ್
ಹೌದು. ಕರ್ನಾಟಕ ಹಾಗೂ ತಮಿಳುನಾಡಿನ ಗಡಿಯಲ್ಲಿರುವ ಹೊಸೂರಿನ ಗ್ರ್ಯಾಂಡ್ ಸಿನಿಮಾಸ್ ಚಿತ್ರಮಂದಿರದಲ್ಲಿ 'ಪ್ರೇಮದ ಊರಲಿ' ಸಿನಿಮಾ ಕಮಾಲ್ ಮಾಡ್ತಿದೆ. ಈಗಾಗಲೇ 41 ಸಾವಿರ ಜನ ಸಿನಿಮಾ ನೋಡಿದ್ದಾರೆ ಎಂದು ಚಿತ್ರಮಂದಿರದ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಈ ಸಂಖ್ಯೆ 50 ಸಾವಿರ ದಾಟುತ್ತದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. ಗ್ರ್ಯಾಂಡ್ ಸಿನಿಮಾಸ್ ಚಿತ್ರಮಂದಿರದಲ್ಲಿ ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುತ್ತದೆ.
ಕನ್ನಡಕ್ಕೆ ಆದ್ಯತೆ
ಹೊಸೂರಿನ ಸುತ್ತಾಮುತ್ತ ಕನ್ನಡ ಮಾತನಾಡುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. 'ಕಾಟೇರ', 'ಮ್ಯಾಕ್ಸ್', 'ಮಾರ್ಕ್' ರೀತಿಯ ದೊಡ್ಡ ಸಿನಿಮಾಗಳು ಅಲ್ಲಿ ಪ್ರದರ್ಶನ ಕಂಡಿದ್ದವು. 4 ಸ್ಕ್ರೀನ್‌ಗಳಿರುವ ಚಿಕ್ಕ ಮಲ್ಟಿಪ್ಲೆಕ್ಸ್ ಗ್ರ್ಯಾಂಡ್ ಸಿನಿಮಾಸ್. ಹಾಗಾಗಿ ಕನ್ನಡ ಚಿತ್ರಗಳಿಗೆ ಶೋಗಳನ್ನು ಕೊಡ್ತಾ ಬರ್ತಿದ್ದಾರೆ. ರೆಸ್ಪಾನ್ಸ್ ನೋಡಿ ಶೋ ಸಂಖ್ಯೆ ಹೆಚ್ಚಿಸುತ್ತಾರೆ. ನಿಮಗೆ ಗೊತ್ತಾ 'ಪ್ರೇಮದ ಊರಲಿ' ಚಿತ್ರ ಮೊದಲ ವಾದ ದಿಢೀರನೆ ಕ್ರೇಜ್ ಹೆಚ್ಚಿಸಿಕೊಂಡಿತ್ತು. ಹಾಗಾಗಿ ಎರಡನೇ ಭಾನುವಾರ ಡಿಮ್ಯಾಂಡ್ ಹೆಚ್ಚಾಗಿ ಬೆಳಗ್ಗೆ 6.15ಕ್ಕೆ ಸ್ಪೆಷಲ್ ಶೋ ಏರ್ಪಡಿಸಲಾಗಿತ್ತು. ಅಷ್ಟರಮಟ್ಟಿಗೆ 'ಪ್ರೇಮದ ಊರಲಿ' ಚಿತ್ರ ಅಲ್ಲಿ ಸದ್ದು ಮಾಡ್ತಿದೆ.
ತಮಿಳು ಚಿತ್ರದ ರೀತಿ ದಾಖಲೆ
ಈ ವರ್ಷ ತಮಿಳಿನ 'ಕರುಪ್ಪು' ಚಿತ್ರಕ್ಕೆ ಗ್ರ್ಯಾಂಡ್ ಸಿನಿಮಾಸ್ ಚಿತ್ರಮಂದಿರದಲ್ಲಿ 50 ಸಾವಿರ ಟಿಕೆಟ್ ಮಾರಾಟವಾಗಿತ್ತು. ನಂತರದ ಸ್ಥಾನದಲ್ಲಿ 'ಪ್ರೇಮದ ಊರಲಿ' ಸಿನಿಮಾ ಇದೆ. ಅಂದರೆ ತಮಿಳಿನ ಸ್ಟಾರ್ ನಟರ ಸಿನಿಮಾಗಳ ರೀತಿ ಕನ್ನಡದ ಸಣ್ಣ ಸಿನಿಮಾವೊಂದು ತಮಿಳುನಾಡಿನಲ್ಲಿ ದರ್ಬಾರ್ ನಡೆಸ್ತಿದೆ.
Nearing half century admits at #GrandCinemasHosur .Content is the king allways.@KA_Talkies @KABoxOffice1 @NamCinema @filmycorner9 @Sandalwoodnews @KannadaMoviez https://t.co/jA0MlZzWdy
— Grand Cinemas (@cinemas_grand) October 19, 2026