ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್'- 2 ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಮೂರು ದಿನಕ್ಕೆ 300 ಕೋಟಿ ರೂ. ಕಲೆಕ್ಷನ್ ಮಾಡಿ ಗಮನ ಸೆಳೆದಿದೆ. ಶೀಘ್ರದಲ್ಲೇ 'ಧರ್ಮನ್' ಸಿನಿಮಾ ಮೂಲಕ ತಲೈವಾ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀರಣ ಭರದಿಂದ ಸಾಗುತ್ತಿದೆ.
ಮೈಸೂರಿನಲ್ಲಿ ಕೂಡ 'ಧರ್ಮನ್' ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಸೆರೆಹಿಡಿಯಲಾಗ್ತಿದೆ. ಸಿಮ್ರನ್, ರಾಶಿ ಖನ್ನಾ ಜೊತೆಗೆ ಶ್ರೀಲೀಲಾ ಕೂಡ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆಕೆ ಕೂಡ ಮೈಸೂರು ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಇದೆಲ್ಲದರ ನಡುವೆ ನಯನತಾರಾ ಸಹ ಈ ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಇದು ರಜನಿಕಾಂತ್ ಹಾಗೂ ನಯನ್ ತೆರೆಹಂಚಿಕೊಳ್ಳುತ್ತಿರುವ 3ನೇ ಸಿನಿಮಾ ಆಗಲಿದೆ.
'ದರ್ಬಾರ್' ಹಾಗೂ 'ಅಣ್ಣಾತ್ತೆ' ಚಿತ್ರಗಳಲ್ಲಿ ರಜನಿಕಾಂತ್ ಹಾಗೂ ನಯನತಾರಾ ಒಟ್ಟಿಗೆ ನಟಿಸಿದ್ದರು. ಇದೀಗ ಮತ್ತೊಮ್ಮೆ ಇಬ್ಬರನ್ನು ಪ್ರೇಕ್ಷಕರು ಒಟ್ಟಿಗೆ ನೋಡುವ ಅವಕಾಶ ಸಿಗುತ್ತಿದೆ. ಒಟ್ಟಾರೆ ನಾಲ್ಕು ಜನ ನಟಿಯರ ನಡುವೆ ರಜನಿಕಾಂತ್ ಕಾಣಿಸಿಕೊಳ್ಳುತ್ತಿರುವುದು ವಿಶೇಷ. 'ಟಾಕ್ಸಿಕ್' ಚಿತ್ರದಲ್ಲಿ ರಾಯನ ಸಹೋದರಿ ಗಂಗಾ ಆಗಿ ನಯನ್ ನಟಿಸಿದ್ದರು. ಒಳ್ಳೆ ಪಾತ್ರ ಸಿಕ್ಕರೆ ಮಾತ್ರ ಆಕೆ ನಟಿಸುತ್ತಾರೆ. 'ಧರ್ಮನ್' ಚಿತ್ರದಲ್ಲಿ ಕೂಡ ಅತಿಥಿ ಪಾತ್ರ ಅಲ್ಲದೇ ಮುಖ್ಯವಾದ ಪಾತ್ರವೇ ಸಿಕ್ಕಿದೆ ಎನ್ನಲಾಗ್ತಿದೆ.
ಅಂದಹಾಗೆ ಕಮಲ್ ಹಾಸನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಡೆಡ್ಲಿ ಡಾಕ್ಟರ್ ಪಾತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಅಶ್ವಥ್ ಮಾರಿಮುತ್ತು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಹಳ ಅದ್ಧೂರಿಯಾಗಿ 'ಧರ್ಮನ್' ಸಿನಿಮಾ ನಿರ್ಮಾಣವಾಗುತ್ತಿದೆ. ಸಂಕ್ರಾಂತಿ ಅಥವಾ ತಮಿಳರ ಹೊಸ ವರ್ಷಕ್ಕೆ(ತಮಿಳು ಪುತ್ತಾಂಡು) ಏಪ್ರಿಲ್ 14ರಂದು ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.
ಮದುವೆ ಬಳಿಕ ಕೂಡ ನಯನತಾರಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾರೋಗಸಿ ಪದ್ಧತಿಯಲ್ಲಿ ದಂಪತಿ ಇಬ್ಬರು ಅವಳಿ ಗಂಡುಮಕ್ಕಳನ್ನು ಪಡೆದಿದ್ದಾರೆ. ಮಕ್ಕಳ ಲಾಲನೆ ಪಾಲನೆ ಜೊತೆಜೊತೆಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ನಯನ್ ನಟನೆಯ 'ಮೂಕುಟ್ಟಿ ಅಮ್ಮನ್-2' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ದೀಪಾವಳಿಗೆ ಸಿನಿಮಾ ತೆರೆಗೆ ಬರಲಿದೆ. 'ಡಿಯರ್ ಸ್ಟೂಡೆಂಟ್ಸ್', 'ರಾಕಾಯಿ' ಸೇರಿ ಮತ್ತೆರಡು ಸಿನಿಮಾ ಆಕೆಯ ಕೈಯಲ್ಲಿವೆ.