ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ದೇವಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಇಂದು(ಅಕ್ಟೋಬರ್ 17) ಬೆಳಿಗ್ಗೆ ಸುಮಾರು 8:30ರ ಸುಮಾರಿಗೆ ಅವನ್ನು ಚೆನ್ನೈನ ಸೂರ್ಯ ಆಸ್ಪತ್ರೆಗೆ ದಾಖಲಾಗಿಸಿಲಾಗಿತ್ತು. ಕೆಲವೇ ಕ್ಷಣಗಳಲ್ಲಿ ಅವರು ನಿಧನರಾಗಿದ್ದಾಗಿ ವರದಿಯಾಗಿದೆ.
ನವೆಂಬರ್ 20, 1950ರಂದು ಜನಿಸಿದ ದೇವಾ ಮುಂದೆ ಚಿತ್ರರಂಗ ಪ್ರವೇಶಿಸಿದರು. 'ದೇವನೇಸನ್ ಚೊಕ್ಕಲಿಂಗಂ' ಎನ್ನುವುದು ಅವರ ನಿಜವಾದ ಹೆಸರು. 80-90ರ ದಶಕದಲ್ಲಿ ದಕ್ಷಿಣ ಭಾರತದ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿ ಅವರು ಹೆಸರು ಮಾಡಿದ್ದರು. ರಜನಿಕಾಂತ್ ನಟನೆಯ 'ಬಾಷಾ', 'ಅಣ್ಣಾಮಲೈ' ಸೇರಿದಂತೆ ಹಲವು ಸಿನಿಮಾಗಳಿಗೆ ಅವರು ಟ್ಯೂನ್ ಹಾಕಿದ್ದರು.
ಕನ್ನಡದಲ್ಲಿ 'ಅಮೃತವರ್ಷಿಣಿ', 'ಕೋಟಿಗೊಬ್ಬ', 'ಸಿಂಹಾದ್ರಿಯ ಸಿಂಹ' ಸೇರಿ ಕೆಲ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿ ದೇವಾ ಕಮಾಲ್ ಮಾಡಿದ್ದರು. 'ಭೀಷ್ಮ' ಕನ್ನಡದಲ್ಲಿ ಅವ್ರು ಟ್ಯೂನ್ ಹಾಕಿದ್ದ ಸಿನಿಮಾ. ತಮಿಳಿನಲ್ಲಿ ಇದೇ ವರ್ಷ ಬಂದ 'ಚಾರುಕೇಶಿ' ಚಿತ್ರಕ್ಕೂ ರಾಗ ಸಂಯೋಜನೆ ಮಾಡಿದ್ದರು. ಮೂರು ಮಲಯಾಳಂ ಹಾಗೂ ಒಂದು ಹಿಂದಿ ಚಿತ್ರಕ್ಕೂ ದೇವಾ ಟ್ಯೂನ್ ಹಾಕಿದ್ದರು.
ತಮಿಳು ಬಿಟ್ಟರೆ ಕನ್ನಡದಲ್ಲೇ ಹೆಚ್ಚು ಸಿನಿಮಾಗಳಿಗೆ ದೇವಾ ಮ್ಯೂಸಿಕ್ ಮಾಡಿದ್ದರು. ಕೆಲ ತಮಿಳು ಸಿನಿಮಾಗಳನ್ನು ಕನ್ನಡಕ್ಕೆ ರೀಮೆಕ್ ಮಾಡಿದಾಗ 'ದೇವಾ' ಸಂಗೀತವನ್ನು ಉಳಿಸಿಕೊಳ್ಳಲಾಗಿತ್ತು. ನಿರ್ದೇಶಕ ಎಸ್. ನಾರಾಯಣ್ ಅವರಿಗೆ ದೇವಾ ನೆಚ್ಚಿನ ಸಂಗೀತ ನಿರ್ದೇಶಕರಾಗಿದ್ದರು. ಚೆನ್ನೈನ ಜನಪ್ರಿಯ 'ಗಾನಾ' ಸಂಗೀತ ಶೈಲಿಯನ್ನು ಸಿನಿಮಾಗಳಿಗೆ ಅಳವಡಿಸಿ ದೇವಾ ಸಕ್ಸಸ್ ಕಂಡಿದ್ದರು. ಇನ್ನು ರೊಮ್ಯಾಂಟಿಕ್ ಹಾಡುಗಳಿಗೆ ಟ್ಯೂನ್ ಹಾಕುವುದರಲ್ಲೂ ಸಿದ್ಧಹಸ್ತರೆನಿಸಿಕೊಂಡಿದ್ದರು.
400ಕ್ಕೂ ಅಧಿಕ ಸಿನಿಮಾಗಳಿಗೆ ದೇವಾ ಸಂಗೀತ ಸಂಯೋಜನೆ ಮಾಡಿದ್ದರು. 'ಖುಷಿ', 'ವಾಲಿ', 'ಕಾದಲ್ ಕೊಟೈ', 'ಅರುಣಾಚಲಂ' ದೇವಾ ಸಂಗೀತದ ಕೆಲ ಜನಪ್ರಿಯ ಆಲ್ಬಮ್ ಎನಿಸಿಕೊಂಡಿದೆ. ಇವತ್ತಿಗೂ ಅವರ ಸಂಗೀತ ಹಾಡುಗಳು ತಮಿಳುನಾಡಿನಲ್ಲಿ ಜನಜನಿತವಾಗಿದೆ. ಕನ್ನಡದಲ್ಲಿ 'ಅಮೃತವರ್ಷಿಣಿ' ಸಿನಿಮಾ ಸಂಗೀತ ಮರೆಯೋಕೆ ಸಾಧ್ಯವಿಲ್ಲ. ದೇವಾ ಅಗಲಿಕೆಗೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.