ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್- 2' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಈಗಾಗಲೇ 450 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ದಸರಾ ರಜೆ ಕೂಡ ಚಿತ್ರಕ್ಕೆ ವರವಾಗಿ ಪರಿಣಮಿಸಿದೆ. ತಲೈವಾ ಒನ್ಮ್ಯಾನ್ ಶೋ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ.
ಫಸ್ಟ್ ಹಾಫ್ ಅದ್ಭುತ, ಸೆಕೆಂಡ್ ಹಾಫ್ ಪರವಾಗಿಲ್ಲ ಎನ್ನುವ ಟಾಕ್ ಇದ್ದರೂ ಫ್ಯಾಮಿಲಿ ಸಮೇತ ಜನ ಸಿನಿಮಾ ನೋಡಿ ಎಂಜಾಯ್ ಮಾಡ್ತಿದ್ದಾರೆ. ಇದೆಲ್ಲದರ ನಡುವೆ 'ಜೈಲರ್- 2' ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಯಾವಾಗ ಎನ್ನುವ ಚರ್ಚೆ ಶುರುವಾಗಿದೆ. ಅಮೇಜಾನ್ ಪ್ರೈಂ ಸಂಸ್ಥೆಗೆ ಚಿತ್ರದ ರೈಟ್ಸ್ ಮಾರಾಟವಾಗಿದೆ. ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುವುದು ಅನುಮಾನ ಎನ್ನಲಾಗ್ತಿದೆ.
1000 ಕೋಟಿ ರೂ. ಕನಸು ?
ತಮಿಳಿನಲ್ಲಿ ಯಾವುದೇ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಸಾಧನೆ ಮಾಡಿಲ್ಲ. 'ಜೈಲರ್- 2' ಆ ಹಾದಿಯಲ್ಲಿ ಮುನ್ನುಗ್ಗುತ್ತಿದೆ. ಆದರೆ ಉತ್ತರ ಭಾರತದಲ್ಲಿ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡ್ತಿಲ್ಲ. ಓಟಿಟಿ ಒಪ್ಪಂದದ ವಿಚಾರದಲ್ಲಿ ಗೊಂದಲ ಮೂಡಿದ್ದು ಪಿವಿಆರ್- ಐನಾಕ್ಸ್ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ಬಿಡುಗಡೆ ಆಗದೇ ಇರುವುದೇ ಇದಕ್ಕೆ ಕಾರಣ. ಉತ್ತರ ಭಾರತದಲ್ಲಿ ಸಿನಿಮಾ ತೆರೆಕಂಡು 8 ವಾರಗಳ ಬಳಿಕ ಓಟಿಟಿ ಸ್ಟ್ರೀಮಿಂಗ್ ಮಾಡಬೇಕು ಎನ್ನುವ ನಿಯಮ ಇದೆ. ಇದನ್ನು ಸನ್ ಪಿಕ್ಚರ್ಸ್ ಒಪ್ಪಿಕೊಳ್ಳದ ಕಾರಣ ಪಿವಿಆರ್- ಐನಾಕ್ಸ್ ಉತ್ತರಭಾರತದಲ್ಲಿ ಸಿನಿಮಾ ಪ್ರದರ್ಶನ ಮಾಡ್ತಿಲ್ಲ.
ಓಟಿಟಿ ಡೀಲ್
160 ಕೋಟಿ ರೂ.ಗೆ 'ಜೈಲರ್- 2' ಓಟಿಟಿ ಡೀಲ್ ಕುದುರಿಸಲಾಗಿದೆ. ಹಿಂದಿ ಸೇರಿ 5 ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಮಾಡಲು ಪ್ರೈಂ ವೀಡಿಯೋ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ. 8 ವಾರಗಳ ಬಳಿಕ ಓಟಿಟಿ ರಿಲೀಸ್ ನಿಯಮಕ್ಕೆ ಒಪ್ಪಿಕೊಂಡರೆ 120 ಕೋಟಿ ರೂ.ಗೆ ವ್ಯವಹಾರ ಕುದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದೇ ಕಾರಣಕ್ಕೆ ಸನ್ ಪಿಕ್ಚರ್ಸ್ ಸಂಸ್ಥೆ ಉತ್ತರ ಭಾರತದಲ್ಲಿ ಸಿನಿಮಾ ದೊಡ್ಡದಾಗಿ ಬಿಡುಗಡೆ ಆಗದೇ ಇದ್ದರೂ ಒಪ್ಪಂದ ಬದಲಿಸಲು ನಿರಾಕರಿಸಿದೆ. ಹಾಗಾಗಿ 4 ವಾರಕ್ಕೆ ಸಿನಿಮಾ ಓಟಿಟಿಗೆ ಲಭ್ಯವಾಗಲಿದೆ.
ನವೆಂಬರ್ 12ಕ್ಕೆ ಸ್ಟ್ರೀಮಿಂಗ್ ?
ಅಕ್ಟೋಬರ್ 15ರಂದು 'ಜೈಲರ್- 2' ಸಿನಿಮಾ ತೆರೆಗಪ್ಪಳಿಸಿತ್ತು. 4 ವಾರಗಳ ಬಳಿಕ ಅಂದ್ರೆ ನವೆಂಬರ್ 12ಕ್ಕೆ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವುದು ಬಹುತೇಕ ಖಚಿತವಾಗಿದೆ. ತಪ್ಪಿದರೆ ನವೆಂಬರ್ 20ರಂದು ಸಿನಿಮಾ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.