ಇತ್ತೀಚೆಗೆ ದರ್ಶನ್ ಹಾಗೂ ಧನ್ವೀರ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಚರ್ಚೆ ನಡೀತಿತ್ತು. ಮೊನ್ನೆ ಮೊನ್ನೆ ವಿಜಯಲಕ್ಷ್ಮಿ ದರ್ಶನ್ ಹಾಗೂ ಧನ್ವೀರ್ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿ ಮಾರ್ಮಿಕವಾಗಿ ಯಾರಿಗೋ ತಿವಿಯುವ ಕೆಲಸ ಮಾಡಿದ್ದರು. ಇದೀಗ ಧನ್ವೀರ್ ಗೌಡ ವಿರುದ್ಧ ವಿಜಯಲಕ್ಷ್ಮಿ ದರ್ಶನ್ ಮ್ಯಾನೇಜರ್ ನಾಗರಾಜ್ ಎಂಬುವವರು ದೂರು ದಾಖಲಿಸಿದ್ದಾರೆ.
ನನಗೆ ಧನ್ವೀರ್ ಗೌಡ ಫೋನ್ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಆಡಿಯೋ ರೆಕಾರ್ಡ್ ಸಮೇತ ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ನಾಗರಾಜ್ ದೂರು ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಧನ್ವೀರ್ ಗೌಡ ಅವರಿಗೆ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ. ಒಟ್ಟಾರೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್ ಈಗ ಧನ್ವೀರ್ ಜೊತೆ ಕಿರಿಕ್ ಮಾಡಿಕೊಂಡಿರುವುದು ಚರ್ಚೆ ಹುಟ್ಟಾಕ್ಕಿದೆ.
ದೂರಿನ ಬಗ್ಗೆ ಪಬ್ಲಿಕ್ ಟಿವಿಗೆ ನಟ ಧನ್ವೀರ್ ಗೌಡ ಪ್ರತಿಕ್ರಿಯಿಸಿದ್ದಾರೆ. ಎಲ್ಲರ ಮುಖವಾಡ ಕಳಚುವ ಸಮಯ ಬಂದಿದೆ. ಯಾರ ಮುಖವಾಡ ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ ಎಂದಿದ್ದಾರೆ. ದೂರು ನೀಡಲಿ ಸಮಸ್ಯೆ ಇಲ್ಲ, ಕಾರಣ ಇಲ್ಲದೇ ಯಾರೂ ಬೈಯ್ಯುವುದಿಲ್ಲ. ಆ ಕಾರಣ ಏನು ಎನ್ನುವುದು ಗೊತ್ತಾದರೆ ತಪ್ಪು ಯಾರದ್ದು ಎಂದು ಗೊತ್ತಾಗಲಿದೆ ಎಂದು ಧನ್ವೀರ್ ತಿಳಿಸಿದ್ದಾರೆ.
ನಾನು ದರ್ಶನ್ ಅವರಿಂದ ಇವತ್ತಿಗೂ ಅಂತರ ಕಾಯ್ದುಕೊಂಡಿಲ್ಲ. ನಾನು ಅವರ ಜೊತೆ ಇರುವುದರಿಂದ ಕೆಲವರ ಕೆಲಸಗಳು ನಡೀತಿಲ್ಲ. ಅದಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ. ಈ ಬಾರಿ ಮುಖವಾಡ ಕಳಚುವರೆಗೂ ಸುಮ್ಮನೆ ಇರುವುದಿಲ್ಲ ಎಂದು ಧನ್ವೀರ್ ಗೌಡ ವಿವರಿಸಿದ್ದಾರೆ.